ಮಂಕುತಿಮ್ಮನ ಕಗ್ಗದಲ್ಲಿ ಮನಸ್ಸಿನ ಗುಣಗಳು- ಲೇಖನ 4

ನಮಸ್ಕಾರ ಎಲ್ಲರಿಗೂ.  ಈ ನಾಲ್ಕನೇ ಲೇಖನದಲ್ಲಿ ಮಂಕುತಿಮ್ಮನ ಕಗ್ಗ ಗ್ರಂಥದಿಂದ ಮನಸ್ಸಿಗೆ ಮತ್ತು  ಅದರ  ಗುಣಗಳಿಗೆ ಸಂಬಂಧಿಸಿದ ಪದ್ಯಗಳನ್ನು ಆಯ್ಕೆ ಮಾಡಿ, ಅದಕ್ಕೆ ಯೋಗ ಸೂತ್ರದ, ವೇದಾಂತ, ಹರಿದಾಸ ಸಾಹಿತ್ಯ ,  ವಚನ ಸಾಹಿತ್ಯ, Dao De Ching ಮತ್ತು  ಮನಶಾಸ್ತ್ರದ ದೃಷ್ಟಿಯಿಂದ ದೃಷ್ಟಿಯಿಂದ ವಿಶ್ಲೇಷಣೆ ಮಾಡುತ್ತೇನೆ.

ಕಠಿಣತ್ವ ಮೃದತ್ವ

ಹಟವಾದಕೆಡೆಯೆಲ್ಲಿ ಮನುಜಪ್ರಪಂಚದಲಿ? ।ಸಟೆಯೆಷ್ಟೊ ದಿಟವೆಷ್ಟೊ ಬೆರೆತಿರುವುವಿಲ್ಲಿ ॥ಪಟುವಾಗಿ ನಿಲಲಹುದೆ ಮಣಲೊಳೆಸಗಿದ ಗೋಡೆ? ।ಕಟುತೆ ಸಲ್ಲದು ಜಗಕೆ—ಮಂಕುತಿಮ್ಮ ॥ ೨೯೯ ||

ಈ ಪ್ರಪಂಚದಲ್ಲಿ ಹಟ ಕಡಿಮೆಯಾಗಬೇಕು ಎಲ್ಲರೊಂದಿಗೆ ಹೊಂದಿಕೊಳ್ಳುವ ಸ್ವಭಾವ ಇರಬೇಕು ಎಂದು ಹೇಳುತ್ತಾರೆ. ಶ್ರೀ ಪುರಂದರದಾಸರು ಕೂಡ  “ಬಿಲ್ಲಾಗಿ ಇರಬೇಕು ಕಠಿಣ  ಭವ ದೊಳಗೆ ಬೆಲ್ಲದಂತಿರಬೇಕು ಬಂಧು ಜನರೊಳಗೆ  ಎಂದು  ಇದೇ ಭಾವನೆಯನ್ನು ಹೇಳುತ್ತಾರೆ.

ಬಸವಣ್ಣನವರು ಕೂಡ


ದಯವಿಲ್ಲದ ಧರ್ಮವದೇವುದಯ್ಯ,

ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ!
ಎಂದು  ದಯೆ ಮತ್ತು ಸಹಾನುಭೂತಿ ಬಗ್ಗೆ ಹೇಳುತ್ತಾರೆ
ಉದಾಹರಣೆ
Dao De Ching ಎನ್ನುವ Lao Tzu  ಬರೆದ ಗ್ರಂಥದಲ್ಲಿಯೂ ಕೂಡ ಇದೇ ಪರಿಕಲ್ಪನೆಯನ್ನು ಮಾಡುತ್ತಾರೆ.ಇದರಲ್ಲಿ  ಬಿದಿರು ಮತ್ತು ಹುಲ್ಲಿನ  ಗರಿಯ ಉದಾಹರಣೆ ಕೊಡುತ್ತಾರೆ.  ಬಿದಿರು ಕಠಿಣವಾಗಿರುವುದರಿಂದ ಗಾಳಿಗೆ ಮತ್ತು ನೀರಿಗೆ ಬಗ್ಗುವುದಿಲ್ಲ.  ಆದರೆ ಗಾಳಿ ಅಥವಾ ನೀರು ಜೋರಾಗಿ ಬಂದರೆ ಮುರಿದು ಬೀಳುತ್ತದೆ.  ಅದೇ ಹುಲ್ಲಿನಗರಿ ಮೃದುವಾಗಿರುವುದರಿಂದ ಗಾಳಿಗೆ ಮತ್ತು ನೀರಿಗೆ ಬಗ್ಗುತ್ತದೆ.   ಹೀಗೆ ಬಗ್ಗುವುದರಿಂದ  ಅದು ಮುರಿಯುವುದಿಲ್ಲ.  ಅದೇ ತರಹ  ಮನುಷ್ಯರ ಮನಸ್ಸು ಕಠಿಣವಾಗಿರದಿದ್ದರೆ,  ಜೀವನದ ಕಷ್ಟಗಳಿಗೆ ಬಗ್ಗಿ ಕೊಂಡು ಅವುಗಳಿಂದ ಪಾರಾಗಬಹುದು.

 ಕಠಿಣತೆಯನ್ನು ಕಡಿಮೆ ಮಾಡಬೇಕು ಎಂದು ಒಂದು ಪದ್ಯವಿದೆ.

The Dao is an empty vessel; 

it is used, but never filled. 

Oh, unfathomable source of ten thousand things! 

Blunt the sharpness, 

Untangle the knot, 

Soften the glare, 

Merge with dust.

 ಇದನ್ನು ಕನ್ನಡದಲ್ಲಿ ಅನುವಾದಿಸಿದ್ದೇನೆ.


Dao ಎಂದರೆ ಬರಿಯ ಮಡಕೆ

ಉಪಯೋಗಿಸಿ, ಆದರೆ ತುಂಬ ಬೇಡಿ

 ಓ ಅನಂತ  ಅಪ್ರಮೇಯನೇ,

ಕಠಿಣತೆಯ ಕಡಿಮೆ ಮಾಡು,

 ಗಂಟುಗಳ ಬಿಚ್ಚು,

ಕಠಿಣ ದೃಷ್ಟಿ  ಮೃದು ಮಾಡು,

ಅನಂತ  ಕಣಗಳ ಜೊತೆ ಒಂದಾಗು. 


ಎಂದು ಹೇಳುತ್ತಾರೆ.  ಇದರಲ್ಲಿ ಕೂಡ  ಕಠಿಣತೆಯನ್ನು ಕಡಿಮೆ ಮಾಡಬೇಕು ನಮ್ರತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುತ್ತಾರೆ. 

ಚಿಂತನೆ ಮಾದರಿಗಳು (Thought patterns)

ವನದಿ ನಿರ್ಜನದಿ ಮೌನದಿ ತಪವನೆಸಗುವನ ।ನೆನಪಿನಲಿ ಪಿಂತಿನನುಭವವುಳಿಯದೇನು? ॥ಇನಿನೋಟ ಸವಿಯೂಟ ಕಿನಿಸು ಕರುಬುಗಳಾಟ ।ಕನಲುತಿಹುವಾಳದಲಿ—ಮಂಕುತಿಮ್ಮ ॥ ೩೭೨ ||

 ಈ ಕವಿತೆ ಮನಸ್ಸಿನಲ್ಲಿರುವ ನೆನಪುಗಳು ನಮ್ಮ ಮನಸ್ಸು ಹರಿಯುವ ಚಿಂತನೆ ಮಾದರಿಗಳು (thought patterns)  ಇವುಗಳ ಬಗ್ಗೆ ಮಾತನಾಡುತ್ತದೆ.  ನಾವು ಎಲ್ಲೇ ಇರಲಿ, ಕಾಡಿನಲ್ಲೇ ಇರಲಿ, ತೀರ್ಥ ಯಾತ್ರೆಗೆ ಹೋಗಲಿ, ಅಥವಾ ನಮ್ಮ ಮನಸ್ಸಿನ ಚಿಂತನೆ ಮಾದರಿಗಳು ನಮ್ಮನ್ನು ಹಿಂಬಾಲಿಸುತ್ತದೆ.  ಇದನ್ನೇ ಯೋಗ ಶಾಸ್ತ್ರದಲ್ಲಿ ಸಂಸ್ಕಾರಗಳು ಎಂದು ಕರೆಯುತ್ತಾರೆ.  ಈ  ಚಿಂತನೆಯ ಮಾದರಿಗಳು ನಮ್ಮನ್ನು ಅವುಗಳಿಗೆ ಪರಿಚಯವಾದ ಮಾರ್ಗದಲ್ಲಿ ಕರೆದು ಕೊಂಡು ಹೋಗುತ್ತದೆ. ಆದುದರಿಂದಲೇ ನಾವು ಎಲ್ಲಿದ್ದರೂ ಈ ಚಿಂತನೆಗಳು ಬರುತ್ತಲೇ ಇರುತ್ತವೆ.  ಇವುಗಳಿಂದ ಬಿಡುಗಡೆಯಾಗಬೇಕಾದರೆ ಹಿಂದೆ ಹೇಳಿದ ನಾಲ್ಕು ಮಾರ್ಗಗಳಾದ ಜ್ಞಾನಯೋಗ,  ಭಕ್ತಿ ಯೋಗ,  ಕರ್ಮ ಯೋಗ,  ರಾಜಯೋಗ ಇವುಗಳಲ್ಲಿ ಒಂದನ್ನು ಅನುಸರಿಸಬೇಕು.  ಈ ಪಥಗಳಲ್ಲಿ ಮುಂದುವರೆದಾಗ ಚಿಂತನೆ ಮಾದರಿಗಳು ನಿಧಾನವಾಗಿ ಕಡಿಮೆಯಾಗುತ್ತದೆ.  ಮೇಲಿನ ಪ್ರಜ್ಞಾವಸ್ಥೆಯನ್ನು ತಲುಪುತ್ತೇವೆ. 



ಮನಸ್ಸು-  ಶತ್ರುವೇ ಅಥವಾ ಮಿತ್ರನೇ?

ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? ।ತನುವನುಗ್ರವ್ರತಗಳಿಂದೆ ದಂಡಿಸಲೇಂ? ॥ಬಿನದಗಳನರಸಿ ನೀನು-ಊರೂರು-ಅಳಲ-ದೊಡೇಂ? ।ಮನವ ತೊರೆದಿರಲಹುದೆ—ಮಂಕುತಿಮ್ಮ ॥ ೩೭೩

 ಈ ಪದ್ಯದಲ್ಲಿ  ಮನಸ್ಸು ನಮಗೆ ಒಳ್ಳೆಯದನ್ನು ಮಾಡುತ್ತದೆಯೋ ಅಥವಾ ಕೆಟ್ಟದ್ದನ್ನು ಮಾಡುತ್ತದೆಯೋ ಅದು ನಮ್ಮ ಮನಸ್ಸಿನ ನಿಯಂತ್ರಣದ ಮೇಲೆ ಅವಲಂಬಿಸಿರುತ್ತದೆ ಎಂದು ಹೇಳುತ್ತಾರೆ.  ಮನೆ ಬಿಟ್ಟು ಹೋದರೂ   ಮನವ ಬಿಟ್ಟು ಹೋಗಲಾಗುವುದಿಲ್ಲ.  ಇದೇ ತರಹ ಕಾಡಿನ ಗುಹೆಗೆ ಹೋದರೂ ಅಥವಾ ದೇಹವನ್ನು ಕಠಿಣ ಮಾರ್ಗದಿಂದ ದಂಡಿಸಿದರೂ  ಅಥವಾ ಊರೂರು ಅಲೆದರೂ ಮನಸ್ಸು ನಮ್ಮ ಜೊತೆಗೆ ಇರುತ್ತದೆ.  ಆದ್ದರಿಂದ ಮನಸ್ಸನ್ನು ಮಿತ್ರನಾಗಿ ಮಾಡಿಕೊಳ್ಳಬೇಕು.  ಇದನ್ನೇ  ಭಗವದ್ಗೀತೆಯಲ್ಲಿ  “ಮನ ಏವ ಮನುಷ್ಯ ಮನುಷ್ಯಾಣಾಮ್  ಕಾರಣಂ ಬಂಧ ಮೊಕ್ಷಯೋಹೋ”  ಹೇಳಿದೆ. ಅಂದರೆ ಮನುಷ್ಯನ ಮನಸ್ಸಿಗೆ ಅವನಿಗೆ ಸಂಸಾರದ ಬಂಧನವನ್ನು ಕೊಡಬಹುದು ಅಥವಾ ಮೋಕ್ಷವನ್ನು ಕೊಡಬಹುದು.  ಸರಿಯಾಗಿ ನಿಯಂತ್ರಣದಲ್ಲಿದ್ದ ಮನಸ್ಸು ನಮ್ಮನ್ನು ಮೋಕ್ಷದ ಕಡೆಗೆ ಕರೆದುಕೊಂಡು ಹೋಗುತ್ತದೆ.  ಮನಸ್ಸು ನಿಯಂತ್ರಣದಲ್ಲಿ ಇಲ್ಲದಿದ್ದಾಗ ನಮ್ಮನ್ನು ಸಂಸಾರದ ಬಂಧನದ ಕಡೆಗೆ ಕರೆದುಕೊಂಡು ಹೋಗುತ್ತದೆ.   

 ರಾಜಯೋಗ

ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ ।ಭೋಜನವ ನೀಡೆನೆನೆ ಮನ ಸುಮ್ಮನಿಹುದೆ? ॥ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ ।ರಾಜಯೋಗದುಪಾಯ—ಮಂಕುತಿಮ್ಮ ॥ ೩೭೪

 ಈ ಪದ್ಯದಲ್ಲಿ ಹಸಿವಾಗುತ್ತಿರುವಾಗ ವಿವಿಧ ಆಹಾರಗಳ ಪರಿಮಳ ಮೂಗಿಗೆ ಬಂದರೆ  ನಮಗೆ ಆಹಾರ ತಿನ್ನುವ ಚಡಪಡಿಕೆ ಆಗುತ್ತದೆ.  ಆಗ   ಅನ್ನ ಸಿಗುವುದಿಲ್ಲ  ಎಂದು ಹೇಳಿದರೆ ಮನಸ್ಸು   ಸುಮ್ಮನಿರುವುದಿಲ್ಲ.   ಹಠ ಯೋಗದಲ್ಲಿ   ನಮ್ಮ ಮನಸ್ಸನ್ನು ದಂಡಿಸುವ  ಕ್ರಿಯೆಗಳು ಇರುತ್ತದೆ.  ಅದು ಸಹಜವಾದದ್ದಲ್ಲ.  ಈ ಸಂಸ್ಕಾರಗಳು  ಮನಸ್ಸಿನ ಚಿಂತನೆಯ ಒಂದು ದಾರಿಯನ್ನು ಹಾಕಿಕೊಂಡು  ಇರುತ್ತದೆ.  ಇದರಿಂದ ಚಿಂತನೆಗಳು ಪ್ರಬಲವಾಗಿ ಸಂಸ್ಕಾರಗಳಿರುವ ದಾರಿಯಲ್ಲಿ ಹೋಗುತ್ತದೆ.  ಈ ಮನಸ್ಸಿನ ಸಂಸ್ಕಾರಗಳನ್ನು ಕಠಿಣವಾಗಿ ಹೊರತೆಗೆಯುವುದರ ಬದಲು ಮೃದುವಾಗಿ ತೆಗೆಯಬೇಕು.  ರಾಜಯೋಗವು ಧ್ಯಾನ ಮಾರ್ಗದಿಂದ ನಮ್ಮ ಮನಸ್ಸಿನ  ಸಂಸ್ಕಾರಗಳನ್ನು  ನಿಧಾನವಾಗಿ ಮೃದುವಾಗಿ ತೆಗೆದುಹಾಕುತ್ತದೆ.  ಆದುದರಿಂದ   ರಾಜಯೋಗವೇ ಉತ್ತಮ. 

 ಮನವ ನಾಳುವ ಪರಿ

ಮನವನಾಳ್ವುದು ಹಟದ ಮಗುವನಾಳುವ ನಯದೆ ।ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ॥ಅನುಕೂಲಿಸದು ಬರಿಯ ಕೂಗು ಬಡಿತಗಳಿನದು ।ಇನಿತಿತ್ತು ಮರಸಿನಿತ—ಮಂಕುತಿಮ್ಮ ॥ ೩೭೫ ||

 ಮಗು ಅಳುತ್ತಿರುವಾಗ  ಅದಕ್ಕೆ  ಸವಿಯಾದ ಮಾತು  ಹೇಳುತ್ತೇವೆ.  ಒಳ್ಳೆಯ ಕಥೆ  ಹೇಳುತ್ತೇವೆ.  ರುಚಿಕರವಾದ ಅನ್ನವನ್ನು ಕೊಡುತ್ತೇವೆ.  ಈ ತರಹ  ಮೃದುವಾದ ಮಾತುಗಳಿಂದ ಮಗುವಿನ  ಅಳುವನ್ನು ನಿಲ್ಲಿಸುತ್ತೇವೆ.  ಅದೇ ರೀತಿ ಮನಸ್ಸನ್ನು ಮೃದುವಾದ ರೀತಿಯಲ್ಲಿ ರಾಜಯೋಗ ಸಾಧನದಿಂದ  ಒಲಿಸಬೇಕು.  ಶ್ರೀ ಕೃಷ್ಣನು ಕೂಡ ಭಗವದ್ಗೀತೆಯಲ್ಲಿ  “शनै: शनैरुपरमेद्बुद्ध्या धृतिगृहीतया” ಮನಸ್ಸನ್ನು ನಿಧಾನವಾಗಿ ಬುದ್ಧಿಯಿಂದ  ಒಲಿಸಬೇಕು  ಎಂದು ಹೇಳುತ್ತಾನೆ.  

ಶಿಶುವೆಂದು ತಿದ್ದು

ಅಂತಾನುಮಿಂತಾನುಮೆಂತೊ ನಿನಗಾದಂತೆ ।ಶಾಂತಿಯನೆ ನೀನರಸು ಮನ ಕೆರಳಿದಂದು ॥ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು ।ಸ್ವಾಂತಮಂ ತಿದ್ದುತಿರು—ಮಂಕುತಿಮ್ಮ ॥ ೩೭೬

  ಹಿಂದಿನ ಪದ್ಯದ  ವಿಷಯವನ್ನೇ ಮುಂದುವರಿಸಿ ಮನಸ್ಸು ಪ್ರಕ್ಶಬ್ದವಾದಾಗ ಅದನ್ನು ಶಾಂತ ರೀತಿಯಿಂದ ಸಂದೇಶ ಹೇಳಬೇಕು.  ಮಗುವಿನಂತೆ ನಿಧಾನವಾಗಿ ತಿಳುವಳಿಕೆ ಹೇಳಬೇಕು ಎಂದು ಹೇಳುತ್ತಾರೆ.  ಆಧುನಿಕ ಮನಶಾಸ್ತ್ರದಲ್ಲಿ Parts Theory  ಅಥವಾ Internal Family systems   ಎನ್ನುವ ಮನಸ್ಸಿನ ಸಿದ್ಧಾಂತ ಇದೆ.  ಇದರಲ್ಲಿ ನಮ್ಮ ಮನಸ್ಸು ಹಲವಾರು ಭಾಗಗಳನ್ನು ಹೊಂದಿದೆ.  ಕೆಲವು ಭಾಗಗಳು  ಸಣ್ಣ ವಯಸ್ಸಿನಲ್ಲಿ ಅಘಾತ ಆದಾಗ, ಈ ಭಾಗಗಳು  ಸಣ್ಣ ವಯಸ್ಸಿನಲ್ಲೇ ನಿಂತು ಬಿಡುತ್ತವೆ.  ಅವು ಬೆಳೆಯುವುದೇ ಇಲ್ಲ.   ಅವುಗಳನ್ನು ಸಣ್ಣ ಮಕ್ಕಳಂತೆ ಮೃದುವಾಗಿ ಮಾತನಾಡಿಸಬೇಕು,  ಸಾಂತ್ವನ ಮಾಡಬೇಕು ಎಂದು ಹೇಳುತ್ತಾರೆ.   ಈ  ಸಿದ್ಧಾಂತಗಳು  1970 ಅಥವಾ 80 ವರ್ಷದಲ್ಲಿ ಪ್ರಾರಂಭವಾದವು.  ಡಿವಿಜಿ ಅವರು ಸುಮಾರು 30- 40 ವರ್ಷಗಳ ಹಿಂದೆ ಈ ವಿಚಾರಗಳನ್ನು ಈ ಕಗ್ಗದ ಪದ್ಯದಲ್ಲಿ ತಿಳಿಸಿದ್ದಾರೆ. 

ಮೋಕ್ಷ

ದಾಸರೋ ನಾವೆಲ್ಲ ಶುನಕನಂದದಿ ಜಗದ ।ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ॥ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹುವು ।ವಾಸನಾಕ್ಷಯ ಮೋಕ್ಷ—ಮಂಕುತಿಮ್ಮ ॥ ೩೮೫

ನಾವೆಲ್ಲ ಜಗತ್ತಿನ ವಾಸನೆಗಳಿಗೆ ಸಿಕ್ಕಿಬಿದ್ದು ನಾಯಿಗಳಂತೆ ಅದರ ದಾಸನಾಗಿದ್ದೇವೆ. ನಮ್ಮನ್ನು ಕಟ್ಟಿ ಹಾಕುವ ಹಗ್ಗಗಳು ನಮ್ಮ ಒಳಗೆ ಇವೆ.   ಈ ವಾಸನೆಗಳನ್ನು   ಕ್ಷೀಣಿಸುವುದೇ ಮೋಕ್ಷ.   ಯೋಗ ಶಾಸ್ತ್ರದಲ್ಲಿ  ನಮ್ಮಲ್ಲಿ ಮೂರು ದೇಹಗಳಿವೆ ಎಂದು ಹೇಳುತ್ತಾರೆ. ಸ್ಥೂಲ  ಶರೀರ, ಸೂಕ್ಷ್ಮ ಶರೀರ,ಮತ್ತು ಕಾರಣ ಶರೀರ .  ಸ್ಥೂಲ ಶರೀರ ನಮಗೆ ಹೊರಗೆ ಕಾಣಿಸುವ ಶರೀರ.  ಅದರೊಳಗೆ ನಿಮಗೆ ಕಾಣಿಸದ ಸೂಕ್ಷ್ಮ ಶರೀರವಿರುತ್ತದೆ.  ಅದರ ಒಳಗೆ ಶುದ್ಧವಾದ ಕಾರಣ ಶರೀರ ಇರುತ್ತದೆ.  ಈ ಮೂರು ದೇಹಗಳನ್ನು ಚಿತ್ರದಲ್ಲಿ ತೋರಿಸಿದೆ.

  ನಮ್ಮ ಸಂಸ್ಕಾರಗಳು ಸೂಕ್ಷ್ಮ ದೇಹದಲ್ಲಿ ಇರುತ್ತದೆ.   

 ಈ ಸಂಸ್ಕಾರಗಳು ನಮ್ಮ ಮನಸ್ಸನ್ನು ಕಟ್ಟಿಹಾಕಿ ಮನಸ್ಸನ್ನು ಬಂಧನದಲ್ಲಿ ಇಳಿಸಿರುತ್ತದೆ.  ಇದನ್ನೇ ಈ ಕಗ್ಗದಲ್ಲಿ ಕೊಂಡಿಗಳು ನಮ್ಮಲ್ಲಿ  ಇವೆ ಎಂದು ಹೇಳುತ್ತಾರೆ. 

 ಯೋಗ   ಶಾಸ್ತ್ರದ ಪ್ರಕಾರ   ನಮ್ಮ  ಸೂಕ್ಷ್ಮ ದೇಹದಲ್ಲಿರುವ ಸಂಸ್ಕಾರಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿದಾಗ,  ನಮ್ಮಲ್ಲಿರುವ ಕಾರಣ ಶರೀರ ಶುದ್ಧ ಅಂತ ಸತ್ವ ಪ್ರಕಾಶಿಸುತ್ತದೆ . ಇದೇ ಮೋಕ್ಷ.

ಕಡಿವಾಣ ತೊಡಿಸು

ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು ।ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು ॥ಹಮ್ಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸೆ ।ನಮ್ಮ ಗುರಿಗೈದಿಪುದು—ಮಂಕುತಿಮ್ಮ ॥ ೩೯೬

 ಋಷಿಗಳು ಈ ದೇಹವನ್ನು ಬ್ರಹ್ಮಪುರಿ ಎಂದು ಕರೆದಿದ್ದಾರೆ.  ಅದನ್ನು ಕೊಳಕಾಗಿರುವ ಹುತ್ತವೆಂದು ಕರೆಯಬೇಡಿ.  ಒಳಗಿರುವ ಮನಸ್ಸು ಒಂದು ಶಕ್ತಿಯುತವಾದ ಕುದುರೆ.  ಅದನ್ನು ಕಡಿವಾಣ ಹಾಕಿರುವ ಒಳ್ಳೆಯ ಕುದುರೆಯಂತೆ ಕಾಪಾಡು. ಆಗ ನಾವು ಗುರಿಮುಟ್ಟಲು ಸಾಧ್ಯ .

  ಇದನ್ನೇ ಕಠೋಪನಿಷತ್  ಬಹಳ ಸುಂದರವಾಗಿ ವರ್ಣಿಸಿದೆ

आत्मानँ रथितं विद्धि शरीरँ रथमेव तु ।

बुद्धिं तु सारथिं विद्धि मनः प्रग्रहमेव च ॥ ३ ॥

यस्त्वविज्ञानवान्भवत्ययुक्तेन मनसा सदा ।

तस्येन्द्रियाण्यवश्यानि दुष्टाश्वा इव सारथेः ॥ ५ ॥

यस्तु विज्ञानवान्भवति युक्तेन मनसा सदा ।
तस्येन्द्रियाणि वश्यानि सदश्वा इव सारथेः ॥ ६ ॥

  ನಮ್ಮ ಶರೀರವನ್ನು ಒಂದು  ರಥವೆಂದು ತಿಳಿ.  ಅದರ ಒಳಗಿರುವ ಆತ್ಮ ರಥದ ಒಡೆಯ.  ಬುದ್ಧಿಯು ಅದರ ಸಾರಥಿ.  ಮನಸ್ಸು  ಅದರ ಲಗಾಮುಗಳು. ಇಂದ್ರಿಯಗಳು  ಕುದುರೆಗಳು.
ಯಾರು ಇಂದ್ರಿಯಗಳನ್ನು  ಹತೋಟಿಯಲ್ಲಿ   ಇಟ್ಟುಕೊಂಡಿರುವುದಿಲ್ಲವೊ,  ಅವರ ರಥದ ಕುದುರೆಗಳು ಏಲ್ಲೆಲ್ಲೋ   ಚಲ್ಲಾ ಪಿಲ್ಲಿಯಾಗಿ ಹೋಗುತ್ತವೆ. ಅವರು ಜೀವನದ ಗುರಿಯ ಕಡೆ ಹೋಗುವುದಿಲ್ಲ.


ಯಾರು ಒಳ್ಳೆಯ ಬುದ್ಧಿಯಿಂದ ಇಂದ್ರಿಯಗಳನ್ನು ಅಂದರೆ ಕುದುರೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾರೆ, ಅವರು ನಮ್ಮ ಜೀವನದ ಗುರಿಯ ಕಡೆ ಆತ್ಮ ರಥ ವನ್ನು ಕರೆದುಕೊಂಡು ಹೋಗುತ್ತಾರೆ. 

 ಈ ರೀತಿ ಮಂಕುತಿಮ್ಮನ ಕಗ್ಗದ ಈ ಪದ್ಯ ದೇಹ ಮತ್ತು ಅದರ  ಮನಸ್ಸಿನ ಶಕ್ತಿಯನ್ನು   ಒಳ್ಳೆಯ ಕುದುರೆಗಳಂತೆ ಕಾಪಾಡಬೇಕು ಎಂದು ಚೆನ್ನಾಗಿ ವರ್ಣಿಸಿದ್ದಾರೆ.

ಈ  ಪ್ರಸ್ತುತಿಯಲ್ಲಿ ನಾವು ಕಗ್ಗದ  ಮನಸ್ಸನ್ನು ವರ್ಣಿಸುವ,  ಮನಸ್ಸನ್ನು ಹತೋಟಿಗೆ ಹೇಗೆ ತೆಗೆದು ಕೊಳ್ಳ ಬೇಕು ಎಂದು ಹೇಳುವ ಅನೇಕ ಪದ್ಯಗಳನ್ನು   ನೋಡಿದೆವು.  ಇಲ್ಲಿ ಡಿವಿಜಿಯವರು ಯೋಗ ಶಾಸ್ತ್ರದ ಭಗವದ್ಗೀತೆಯ ಮತ್ತು ಮನಸ್ ಶಾಸ್ತ್ರದ ಸೂಕ್ಷ್ಮವಾದ ಪರಿಕಲ್ಪನೆಗಳನ್ನು ಹೇಳುತ್ತಾರೆ.  ಡಿವಿಜಿಯವರಿಗೆ ಈ ವಿಷಯದಲ್ಲಿ ಆಳವಾದ ಪರಿಣಿತಿ ಇತ್ತು ಎಂದು ಗೊತ್ತಾಗುತ್ತದೆ. 

ಈ ವಾರದ  ಪ್ರಸ್ತುತಿ ಯನ್ನು ಕೇಳಿದ ಎಲ್ಲರಿಗೂ ಧನ್ಯವಾದಗಳು.  ನಿಮ್ಮ ಅಭಿಪ್ರಾಯ ತಿಳಿಸಿ. ಅವಕಾಶ ಮಾಡಿಕೊಟ್ಟ ಶ್ರೀ ಉದಯ್ ಅವರಿಗೆ ಧನ್ಯವಾದಗಳು.

References:

Dao De Ching- https://classics.mit.edu/Lao/taote.html

Internal Family Systems: https://ifs-institute.com/
No Bad Parts: Healing Trauma and Restoring Wholeness with the Internal Family Systems Model– Richard Schwartz

Leave a comment