ಎರಡನೆಯ ಲೇಖನ ಗಳಲ್ಲಿ ಶ್ರೀ ಡಿವಿಜಿಯವರು ನೂತನ ತತ್ವಶಾಸ್ತ್ರ ಚಿಂತನೆಯನ್ನು ಮುಂದುವರಿಸುತ್ತಾ ಒಳ್ಳೆಯದು ಅಂದರೆ ಏನು ಮತ್ತು ಧರ್ಮ ಅರ್ಥ ಕಾಮ ಮೋಕ್ಷಗಳ ಬಗ್ಗೆ ವಿವರಿಸುತ್ತಾರೆ.
ಮೊದಲನೆಯ ಲೇಖನದಲ್ಲಿಒಳ್ಳೆಯದು ಎಂದರೆ ಏನು ಎಂದು ವಿವರಿಸುತ್ತಾರೆ. ನಮಗೆ ಇಷ್ಟವಾಗಿದ್ದೆಲ್ಲ ಒಳ್ಳೆಯದೇ ಇಂದು ಪ್ರಶ್ನೆಸುತ್ತಾರೆ. ಕೆಲವರಿಗೆ ಸಾರಾಯಿ ಇಷ್ಟವಾಗಬಹುದು. ಮತ್ತೆ ಕೆಲವರಿಗೆ ಸಿಹಿ ತಿಂಡಿ ಇಷ್ಟವಾಗಬಹುದು. ಇದೆಲ್ಲ ಒಂದು ಸ್ವಲ್ಪ ಕ್ಷಣಕಾಲಕ್ಕೆ ಒಳ್ಳೆಯದು ಎಂದು ತೋರುತ್ತದೆ. ನಮಗೆ ಇಷ್ಟವಾದ ತಿಂದು ತಿಂಡಿ ತಿನಿಸುಗಳು ಹೊಟ್ಟೆ ತುಂಬಿದಾಗ ಇಷ್ಟವಾಗುವುದಿಲ್ಲ. ಆದುದರಿಂದ ಅದು ಯಾವಾಗಲೂ ಒಳ್ಳೆಯದು ಅನಿಸುವುದಿಲ್ಲ.
ಹಾಗಾದರೆ ಒಳ್ಳೆಯದು ಎಂಬುದರ ಸ್ವಭಾವ ಏನು ? ಒಳ್ಳೆಯದು ಪದದ ಬೇರನ್ನು ನೋಡಿದಾಗ ಒಳ್ ಅಂದರೆ ಇರುವುದು ಎಂಬ ಅರ್ಥ ಬರುತ್ತದೆ. ಸಂಸ್ಕೃತದಲ್ಲಿಯೂ ಇದೇ ತರಹದ ಪದ ಇದೆ. ಅದನ್ನು ಸತ್ ಎಂದು ಕರೆಯುತ್ತಾರೆ. ಈ ಪದಕ್ಕೂ ಇರುವಿಕೆ ಎಂಬ ಅರ್ಥ .
ಶ್ರೀ ಡಿವಿಜಿಯವ ರು ಭಗವದ್ಗೀತೆಯ ೧೭.೨೬ಶ್ಲೋಕ ಉದಾಹರಣೆಸಿ सद्भावे साधुभावे च सदित्येतत्प्रयुज्यते | ಈ ಶ್ಲೋಕದಿಂದ ಸತ್ ಎಂದರೆ ಒಳ್ಳೆಯದು ಎಂದು ಹೇಳುತ್ತಾರೆ. ಸತ್ ಎಂದರೆ ಶಾಶ್ವತ ಎಂಬ ಅರ್ಥವೂ ಇದೆ. ಆಮೇಲೆ ಶ್ರೀ ಡಿವಿಜಿಯವರ ವೇದಾಂತದ ಅರ್ಥವನ್ನು ಹೇಳುತ್ತಾರೆ ವೇದಾಂತದಲ್ಲಿ ಅಂತಿಮ ಸತ್ಯವಾದ ಬ್ರಹ್ಮನ್ ಎನ್ನುವ ವಸ್ತು ಸತ್- ಚಿತ್ ಆನಂದ ಎನ್ನುವ ಅರ್ಥದಲ್ಲಿ ಸತ್ ಎಂದರೆ ಪ್ರಪಂಚದ ಎಲ್ಲಾ ಕಡೆ ಹರಡಿರುವ ಎಲ್ಲರ ಅಂತರ್ಯಾಮಿ ಆಗಿರುವ ಮಹಾ ಚೈತನ್ಯ ಶಕ್ತಿಯೇ ಪರಮಾತ್ಮ ಪರಬ್ರಹ್ಮ ಭಗವಂತ. ಅದೇ ಸತ್.
ಈಶಾವಾಸ್ಯ ಉಪನಿಷತ್ ಕೂಡ ಇದನ್ನೇ ಮೊದಲನೆಯ ಶ್ಲೋಕದಲ್ಲಿ ವಿವರಿಸುತ್ತದೆ. ईशावास्यमिदं सर्वं यत्किञ्च जगत्यां जगत् । ಜಗತ್ತನ್ನೇ ಆವರಿಸಿರುವ ಜಗತ್ತಿನ ಒಳಗೂ ಹೊರಗೂ ಇರುವ ಮಹತ್ ತತ್ವ- ಬ್ರಹ್ಮ ನನ್ನ ವಿವರಿಸುತ್ತದೆ.
ಈ ಲೇಖನದ ಕೊನೆಯಲ್ಲಿ ಶ್ರೀ ಡಿವಿಜಿ ಅವರು ನಮ್ಮ ನಡವಳಿಕೆ, ಅರಿವು, ಕ್ರಿಯೆಗಳು ಈ ಸತ್ ಶಕ್ತಿಯ ಕಡೆಗೆ ಕರೆದುಕೊಂಡು ಹೋಗುತ್ತದೆಯೋ ಅದು ಒಳ್ಳೆಯದು. ಯಾವ ನಡವಳಿಕೆ, ಕ್ರಿಯೆಗಳು ಈ ಸತ್ ಶಕ್ತಿಯ ಕಡೆಗೆ ಕರೆದುಕೊಂಡು ಹೋಗುವುದಿಲ್ಲವೇ ಅದು ಕೆಟ್ಟದ್ದು. ದೇವರು ಒಬ್ಬನು. ಅವನ ಆಕಾರ ಹೆಸರುಗಳು ಗುಣಗಳು ಸಾವಿರ ಅಂದರೆ ಅನಂತ. ಹೀಗೆ ಮಹರ್ಷಿಗಳು ಒಳ್ಳೆಯದು ಕೆಟ್ಟದ್ದನ್ನು ನಿಶ್ಚಯಿಸಿದ್ದಾರೆ ಎಂದು ಹೇಳುತ್ತಾರೆ.
ಇಲ್ಲಿ ಶ್ರೀ ಡಿವಿಜಿಯವರು ತತ್ವಶಾಸ್ತ್ರದಲ್ಲಿ ಪ್ರಮಾಣ ವಿಚಾರ ಶಾಸ್ತ್ರ (Epistemology) ಎಂದು ಕರೆಯುತ್ತಾರೆಯೋ ಅದನ್ನು ಸಂಕ್ಷೇಪದಲ್ಲಿ ವಿವರಿಸಿದ್ದಾರೆ. ಭಗವದ್ಗೀತೆ ಮತ್ತು ಉಪನಿಷತ್ ಗಳಲ್ಲಿ ಸತ್ ಎಂದು ಹೇಳಿರುವ ಮತ್ತು ಕನ್ನಡದಲ್ಲಿ ಹೇಳಿರುವ ಉಳ್ಳ ಅಥವಾ ಒಳ್ಳೆಯದು ಅವುಗಳನ್ನು ಸಮೀಕರಿಸಿ, ಅವರ ವಿಚಾರದ ಲಹರಿಯಲ್ಲಿ ತತ್ವಶಾಸ್ತ್ರದ ಮೊದಲನೆಯ ಮೆಟ್ಟಿಲಾದ ಪ್ರಮಾಣ ವಿಚಾರ ಶಾಸ್ತ್ರವನ್ನು ಸಂಕ್ಷೇಪವಾಗಿ ಹೇಳಿದ್ದಾರೆ.
ನಾವು ಹೀಗೆ ಶ್ರೀ ಡಿವಿಜಿ ಅವರು ಗಹನವಾದ ತತ್ವಶಾಸ್ತ್ರದ ವಿಚಾರಗಳನ್ನು ಸಾಮಾನ್ಯ ಜನರಿಗೆ ಸುಲಭವಾಗಿ ವಿವರಿಸುವ ಅವರ ಶಕ್ತಿಯನ್ನು ಕಾಣಬಹುದು.
ಮುಂದಿನ ಲೇಖನದಲ್ಲಿ ಚತುರ್ವಿಧ ಪುರುಷಾರ್ಥಗಳ ಬಗ್ಗೆ ಬರೆಯುತ್ತಾರೆ .
ಇಲ್ಲಿಯೂ ಕೂಡ ಶ್ರೀ ಡಿವಿಜಿಯವರು ಚತುರ್ವಿಧ ಪುರುಷಾರ್ಥಗಳನ್ನು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಹೇಳುತ್ತಾರೆ
ಮೊದಲನೆಯ ಪುರುಷಾರ್ಥ ಧರ್ಮ. ಇದನ್ನು ಒಳ್ಳೆಯ ನಡವಳಿಕೆ ಆತ್ಮದ ಸ್ವಾಭಾವಿಕ ವಿಕಾಸ ಎಂದು ಹೇಳುತ್ತಾರೆ. ಯಾರಿಗೂ ಕೇಡಾಗದಂತೆ, ಎಲ್ಲರಿಗೂ ಒಳ್ಳೆಯದಾಗುವಂತೆ ನಡೆದುಕೊಂಡು ನಮ್ಮ ಬಾಳನ್ನು ಉತ್ತಮ ಮಾಡಿಕೊಳ್ಳುವ ವಿಧಾನ. ಇದನ್ನು ಧರ್ಮ ಎಂದು ಶ್ರೀ ಡಿವಿಜಿಯವರು ಹೇಳುತ್ತಾರೆ. ಧರ್ಮದಲ್ಲಿ ಸತ್ಯ, ಶುಚಿ, ಗುಣ-ಶಕ್ತಿಗಳ ಪ್ರಕಾಶ, ಜನರಲ್ಲಿ ಪರಸ್ಪರ ನ್ಯಾಯ, ಸಹಾನುಭೂತಿ, ಗೌರವ, ಭೂತ ದಯೆ, ವಿಶ್ವಜೀವ ಗೌರವ ಇವೆಲ್ಲವೂ ಸೇರಿರುತ್ತವೆ. ಇದರ ಜೊತೆಗೆ ದೇವರ ಧ್ಯಾನ ಪೂಜೆ ವ್ರತ ತಪಸ್ಸು ಯಜ್ಞ ದೀಕ್ಷೆ ದಾನ ಪರೋಪಕಾರ ಇವೆಲ್ಲವನ್ನು ಸೇರಿಸುತ್ತಾರೆ, ಡಿವಿಜಿಯವರು ಸಾಮಾನ್ಯ ಜನರಿಗೆ ಧರ್ಮವನ್ನು ನಿಖರವಾಗಿ ಶಾಸ್ತ್ರ ರೀತಿಯಿಂದ ಹೇಳುವುದು ಸಾಧ್ಯವಿಲ್ಲದಿದ್ದರೂ ಅದರ ಸ್ವರೂಪವನ್ನು ತಮ್ಮ ಮನಸ್ಸಿನಲ್ಲಿ ಕಂಡುಕೊಳ್ಳುತ್ತಾರೆ ಇಂದು ಹೇಳುತ್ತಾರೆ. ಶ್ರೀ ಡಿವಿಜಿಯವರ ಮನು ಧರ್ಮಶಾಸ್ತ್ರದ ಈ ಶ್ಲೋಕವನ್ನು ಧರ್ಮದ ಅರ್ಥವನ್ನು ಹೇಳಲು ಉದಾಹರಿಸುತ್ತಾರೆ.
ಧೃತಿ: ಕ್ಷಾಮ ದಮೋಸ್ತೆಯಂ ಶೌಚಂ ಇಂದ್ರಿಯ ನಿಗ್ರಹ: |
ಧೀರ್ವಿದ್ಯಾ ಸತ್ಯಂ ಅಕ್ರೋಧೋ ದಶಕ೦ ಧರ್ಮಲಕ್ಷಣಂ ||
ಧೈರ್ಯ ಕ್ಷಮೆ ಆತ್ಮ ನಿಯಂತ್ರಣ, ಪರರ ಧನವನ್ನು ಬಯಸದಿರುವುದು, ಶುಚಿಯಾಗಿರುವುದು ಇಂದ್ರಿಯ ನಿಗ್ರಹ , ಬುದ್ಧಿಯ ಪರಿಶೋಧನೆ ವಿದ್ಯಾರ್ಜನೆ ಸತ್ಯನಿಷ್ಠೆ ಕೋಪವಿಲ್ಲದಿರುವುದು ಈ 10 ಲಕ್ಷಣಗಳು ಸಾಮಾನ್ಯ ಧರ್ಮದ ಲಕ್ಷಣಗಳು.
ಭಗವದ್ಗೀತೆ ೧೬.೧ ದೇವಿ ಗುಣ ವುಳ್ಳ ಮನುಷ್ಯನಿಗೆ 23 ಲಕ್ಷಣಗಳನ್ನು ಹೇಳುತ್ತಾರೆ. ಭಾಗವತದ ಏಳನೇ ಅಧ್ಯಾಯದಲ್ಲಿಯೂ ಒಳ್ಳೆಯ ಮನುಷ್ಯನ ಲಕ್ಷಣಗಳನ್ನು ಹೇಳುತ್ತಾರೆ. ಶ್ರೀ ಡಿವಿಜಿಯವರು ಇಲ್ಲಿ ಈ ವಿಚಾರಗಳನ್ನು ಸಂಗ್ರಹಿಸಿ ಧರ್ಮದ ಮೂಲಭೂತ ಲಕ್ಷಣಗಳನ್ನು ಚೆನ್ನಾಗಿ ಹೇಳುತ್ತಾರೆ.
ಎರಡನೆಯ ಪುರುಷಾರ್ಥ ಅರ್ಥ. ಅರ್ಥ ಎಂದರೆ ಹಣ ಚಿನ್ನ ಸಂಪತ್ತು. ಧರ್ಮ ಮಾರ್ಗದಲ್ಲಿ ನಮಗೆ ಜೀವನಕ್ಕೆ ಬೇಕಾದ ಆಹಾರ, ಮನೆ ಇವುಗಳನ್ನು ಸಂಪಾದನೆ ಮಾಡುವುದು ಅರ್ಥದ ಮೂಲಕ. ಆದರೆ ಮಿತಿಮೀರಿ ಅರ್ಥವನ್ನೇ ಹುಡುಕುತ್ತಾ ಹೋದರೆ ಧರ್ಮ ಮಾರ್ಗ ಮರೆತು ಹೋಗುತ್ತದೆ ಎಂದಿದ್ದಾರೆ. ಹಾಗೆಂದು ಅರ್ಥ ಸಂಪಾದನೆಯನ್ನು ಮರೆಯುವುದು ಸರಿಯಲ್ಲ. ವೇದದ ಮಾತು भूत्यै न प्रमदितव्यम् ಎನ್ನುವುದನ್ನು ಉದಾಹರಿಸುತ್ತಾರೆ. ನಮ್ಮಲ್ಲಿರುವ ಸಂಪತ್ತನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಇದು ಕೂಡ ಅರ್ಥದ ( ಸಂಪತ್ತಿನ) ಅರ್ಥದಲ್ಲಿ ಸೇರುತ್ತದೆ.
ಮೂರನೆಯ ಪುರುಷಾರ್ಥ ಕಾಮ ಎಂದರೆ ಎಲ್ಲಾ ವಿಧದ ಆಸೆಗಳು., ದೈಹಿಕ, ಮಾನಸಿಕ, ಆರ್ಥಿಕ ರೂಪದ ಆಸೆಗಳು. ಶ್ರೀ ಡಿವಿಜಿ ಅವರು ಪ್ರೇಮ, ಸ್ನೇಹ ಮೃಷ್ಟಾನ್ನಭೋಜನ, ಸೌಂದರ್ಯ ಸಂಗೀತ ಚಿತ್ರಪಟ ಇವೆಲ್ಲವೂ ಕಾಮದ ರೂಪಗಳು ಎಂದು ಹೇಳುತ್ತಾರೆ. ಕಾಮವೂ ಕೂಡ ಧರ್ಮದ ಮಿತಿಯನ್ನು ಮೀರದೆ ಇದ್ದರೆ ಜೀವನವು ಸುಖಕರವಾಗಿರಲು ಸಹಾಯ ಮಾಡುತ್ತದೆ.
ಭಾರತದ ತತ್ವ ಶಾಸ್ತ್ರದಲ್ಲಿ ಕಾಮ, ಅರ್ಥಗಳೆರಡೂ ಧರ್ಮದ ವ್ಯಾಪ್ತಿಗೆ ಒಳಪಟ್ಟು ಮನುಷ್ಯನು ಈ ಪ್ರಪಂಚದಲ್ಲಿ ಇದ್ದು ಈ ಪ್ರಪಂಚದ ಮಿತಿಯನ್ನು ಮೀರಿ ಮೋಕ್ಷದ ಕಡೆ ಹೋಗಲು ಸಹಾಯ ಮಾಡುತ್ತದೆ. ಶ್ರೀ ಡಿವಿಜಿಯವರು ಶ್ರೀ ಕೃಷ್ಣನ ಭಗವದ್ಗೀತೆಯಲ್ಲಿ ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಎಂಬುದನ್ನು ಉಲ್ಲೇಖ ಮಾಡಿದ್ದಾರೆ. ಧರ್ಮಕ್ಕೆ ವಿರುದ್ಧವಾಗಿ ಹೋಗದ ಜೀವಿಗಳ ಕಾಮದಲ್ಲಿ ನಾನಿದ್ದೇನೆ ಎಂದು ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ
ಶ್ರೀ ಡಿವಿಜಿಯವರು ನಾಲ್ಕನೇ ಪುರುಷಾರ್ಥವಾದ ಮೋಕ್ಷದ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾವನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಏಕೆಂದರೆ ಬಾಳಿಗೊಂದು ನಂಬಿಕೆ ಪುಸ್ತಕದ ಮುಖ್ಯ ಗುರಿ ಮೋಕ್ಷದ ಬಗ್ಗೆ ಇಲ್ಲ. ಈ ಪ್ರಪಂಚದಲ್ಲಿ ಹೇಗೆ ಬದುಕಬೇಕು ಎಂಬ ಬಗ್ಗೆ ಚಿಂತನೆ ಇದೆ.
ಶ್ರೀ ಡಿವಿಜಿಯವರು ಮೋಕ್ಷವನ್ನು ವಿಶೇಷವಾಗಿ ವಿರಕ್ತರಿಗೂ, ಯತಿಗಳಿಗೂ, ಯೋಗಿಗಳಿಗೂ ಸಂಬಂಧಪಟ್ಟದ್ದು ಹೇಳುತ್ತಾರೆ . ಸಂಸಾರದ ತಾಪತ್ರೆಯ ಗಳ ಜಂಜಾಟದಿಂದ ಬಿಡಿಸಿಕೊಳ್ಳುವುದು ಮೋಕ್ಷ ಎಂದಿದ್ದಾರೆ. ಪರಮಾತ್ಮನ ಜ್ಞಾನವೆಂಬುದು ಬಂದರೆ ಎಲ್ಲಾ ಮೋಹಬ್ರಾಂತಿಗಳು ಕಳೆದು ಹೋಗಿ ಜೀವನಭಾರ ಕಡಿಮೆಯಾಗಿ ಶಾಶ್ವತ ಶಾಂತಿ ಲಭ್ಯವಾಗುತ್ತದೆ. ಇದೇ ಮೋಕ್ಷ ಎಂದು ಹೇಳುತ್ತಾರೆ.
ಇಲ್ಲಿ ಶ್ರೀ ಡಿವಿಜಿ ಯವರು ಸಾಮಾನ್ಯವಾಗಿ ಬಳಸುವ ಮೋಕ್ಷ ಪದದ ಅರ್ಥವನ್ನು ಹೇಳಿಲ್ಲ. ಮೋಕ್ಷ ಎಂಬುದು ಜನನ ಮರಣಗಳ ಬಂಧನದಿಂದ ಮುಕ್ತ ಹೊಂದುವುದು ಎಂದು ಹೇಳುತ್ತಾರೆ. ಆದರೆ ಶ್ರೀ ಡಿವಿಜಿಯವರು ಈ ಪುಸ್ತಕವನ್ನು ಈ ಪ್ರಪಂಚದಲ್ಲಿ ಹೇಗೆ ಬದುಕಬೇಕು ಎಂಬ ದೃಷ್ಟಿಯಿಂದ ಹೇಳಿ ಇದರಿಂದ ಅಷ್ಟು ಪ್ರಾಮುಖ್ಯತೆ ಕೊಟ್ಟಿಲ್ಲ ಎಂದು ಅನಿಸುತ್ತದೆ.
ಇಲ್ಲಿ ನಮ್ಮ ಉದ್ದೇಶ ಎನ್ನುವ ಲೇಖನದಲ್ಲಿ ಶ್ರೀ ಡಿವಿಜಿ ಅವರು ಗುರಿಯನ್ನು ತಲುಪಿಸಬಲ್ಲ ಒಂದು ಜೀವನ ಯಾತ್ರೆಯ ನಕಾಶೆಯನ್ನು ಹೇಳಿದ ಪ್ರಯುಕ್ತ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಈ ಸಮಯದಲ್ಲಿ ಹತ್ತಾರು ಹೊಸ ಹೊಸ ಶತ್ರುಗಳು ಹೊಸ ಹೊಸ ಮತಗಳು ಬಂದಿವೆ ನಮ್ಮ ಮನಸ್ಸನ್ನು ಹಳೆಯ ನಂಬಿಕೆಗಳನ್ನು ಕದಲಿಸಿ ಹೊಸ ಸಂದೇಹ ಸಂಕ್ಷೋಭೆಗಳನ್ನು ಹರಿದಿವೆ ಎಂದು ಹೇಳುತ್ತಾರೆ. ಬಹುಶಹ ಅವರು ವಿಜ್ಞಾನ, ಮಾರ್ಕ್ಸ್ ವಾದ, ಬೇರೆ ಮತಗಳು ಇತ್ಯಾದಿ ಹೊಸ ತತ್ವಶಾಸ್ತ್ರಗಳ ಬಗ್ಗೆ ಮಾತನಾಡುತ್ತಿರಬಹುದು.
ಆಮೇಲೆ ಅವರು ಇದು ಪಂಡಿತರಿಗಾಗಿ ಬರೆದ ಗ್ರಂಥವಲ್ಲ. ಅತಿ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿರಿಸಿಕೊಂಡು ಬರೆದ ಲೇಖನಗಳು ಎಂದು ಹೇಳುತ್ತಾರೆ. ಈ ಗ್ರಂಥವು ಒಂದೇ ವಾಕ್ಯದಲ್ಲಿ ಉಪದೇಶ ಬೇಕು ಎನ್ನುವವರಿಗೆ ಉಪಯುಕ್ತವಾಗುವುದಿಲ್ಲ ಎಂದಿದ್ದಾರೆ. “ರಾಮನಾಮ ತಾರಕ, ವಿಭೂತಿ ಧಾರಣೆ ಮೋಚಕ” ಎಂಬ ಪ್ರಯೋಗಗಳು ಉಪಯುಕ್ತವಾಗುವುದಿಲ್ಲ. ಈ ಪುಸ್ತಕದ ಸಿದ್ಧಾಂತಗಳು ಅನೇಕ ಮುಖವಾಗದದ್ದು ಎಂದು ಹೇಳಿದ್ದಾರೆ. ಉದಾಹರಣೆಗೆ ನದಿ ಅಗಲವಾದಷ್ಟು ಅದನ್ನು ದಾಟುವ ಸೇತುವೆಗೆ ಕಮಾನುಗಳು ಜಾಸ್ತಿ ಇರುತ್ತವೆ. . ಆದ್ದರಿಂದ ಈ ಜೀವನದ ಮಹಾನದಿಯನ್ನು ದಾಟಲು ನಾವು ಕೂಡ ಅನೇಕ ವಿಧವಾದ ಸಾಧನೆಗಳನ್ನು ಮಾಡಲು ಸಿದ್ಧವಾಗಿರಬೇಕು ಎಂದು ಹೇಳುತ್ತಾರೆ.
ಹಾಗಾದರೆ ಜೀವನವನ್ನು ಸಾಗಿಸಲು ಯಾವ ತರಹ ಸೂತ್ರಗಳನ್ನು ಅನುಸರಿಸಬೇಕು ಎಂದು ಕೇಳಿದರೆ ಮಹಾತ್ಮ ಗಾಂಧಿಯವರ ಜೀವನದ ದರ್ಶನ ಮುಂದೆ ಕೊಡುತ್ತಾರೆ. ಶ್ರೀಗಂಧೀಜಿಯವರು ಮಹಾ ಪಂಡಿತರಲ್ಲ, ನೂರಾರು ಗ್ರಂಥಗಳನ್ನು ಅಧ್ಯಯನ ಮಾಡಿದವರಲ್ಲ ಒಂದು ನಾಲ್ಕೈದು ಸಾಮಾನ್ಯ ತತ್ವಗಳನ್ನು ನಂಬಿಕೆ ಇಟ್ಟು ಶ್ರದ್ಧೆಯಿಂದ ಅನುಸರಿಸಿ ಜೀವನವನ್ನು ಸಾರ್ಥಕ ಮಾಡಿಕೊಂಡರು. ಅದೇ ತರಹ ನಾವುಗಳು ಕೂಡ ಕೆಲವು ಸರಲ ತತ್ವಗಳನ್ನು ಅನುಸರಿಸಿ ಅನುಷ್ಠಾನ ಮಾಡಿದರೆ ನಮ್ಮ ಜೀವನವು ಉತ್ತಮವಾಗುತ್ತದೆ ಎಂದಿದ್ದಾರೆ.
ಈ ವಿಶ್ಲೇಷಣೆ ಸಾಮಾನ್ಯ ಯೋಗ ಅಥವಾ ವೇದಾಂತ ಗ್ರಂಥಗಳಲ್ಲಿ ಹೇಳುವ ತತ್ವಗಳಿಗಿಂತ ವಿಭಿನ್ನವಾಗಿದೆ. ಶ್ರೀ ಡಿವಿಜಿ ಅವರು ಹೇಳುವಂತೆ ಸಾಮಾನ್ಯ ಜನರಿಗೆ ಇದು ಯೋಗ್ಯವಾಗಬಹುದು. ಕೆಲವರಿಗೆ ಇದು ಸರಿ ಅನಿಸದೆ ಇರಬಹುದು. , ಏನೇ ಇರಲಿ. ಶ್ರೀ ಡಿವಿಜಿಯವರು ಈಗಿನ ತಮ್ಮ ಆಲೋಚನೆಗಳನ್ನು, ತಮ್ಮ ಸಲಹೆಗಳನ್ನು ಎಲ್ಲರ ಮುಂದೆ ಇಟ್ಟಿದ್ದಾರೆ. ಇದಕ್ಕೆ ಅವರನ್ನು ಅಭಿನಂದಿಸಬೇಕು.